ಕಂಚುಕಗಳು : ಚಿದ್ರೂಪಿಯಾದ ಆತ್ಮನ ಸ್ವರೂಪಾವರಣಗಳು. ಇವು ಸಂಖ್ಯೆಯಲ್ಲಿ ಆರು. ಇವುಗಳಲ್ಲಿ ಮೊದಲನೆಯದಾದ ಮಾಯೆಯ ಪ್ರಭಾವದಿಂದ ಆತ್ಮನ ಸ್ವರೂಪಾಭಿನ್ನವಾಗಿರುವ ಸರ್ವಜ್ಞತ್ವ, ಸರ್ವಕರ್ತೃತ್ವ, ಪುರ್ಣತ್ವ, ವ್ಯಾಪಕತ್ವ, ನಿತ್ಯತ್ವ ಶಕ್ತಿಗಳು ಸಂಕುಚಿತವಾಗಿ ವಿದ್ಯಾ, ಕಲಾ, ರಾಗ, ಕಾಲ, ನಿಯತಿರೂಪಗಳಿಂದ ಮಾರ್ಪಟ್ಟವು. ಇವನ್ನು ಕಂಚುಕಪಂಚಕಗಳೆನ್ನುತ್ತಾರೆ. ಈ ಐದು ತತ್ತ್ವಗಳು. ಬಟ್ಟೆಗೆ ಬಣ್ಣ ಅಂಟಿಕೊಂಡಿರುವ ಹಾಗೆ ಜೀವಾತ್ಮನಿಗೆ ಅಂಟಿಕೊಂಡಿರುವಂಥವು. ಭೇದದೃಷ್ಟಿ, ಭೇದಭಾವ, ಭೇದಜ್ಞಾನವನ್ನುಂಟುಮಾಡುವ ಶಕ್ತಿವಿಶೇಷವೇ ಮಾಯೆ. ಈ ಆರು ಕಂಚುಕಗಳು ಆತ್ಮನ ಸ್ವರೂಪವನ್ನು ಮರೆಮಾಚಿ ಶಕ್ತಿಗಳನ್ನು ಸಂಕೋಚಗೊಳಿಸಿ ಆತ್ಮನನ್ನು ಬದ್ಧಜೀವವನ್ನಾಗಿ ಮಾಡುತ್ತವೆ. ಈ ಸಂಪುಟದಲ್ಲಿ ಸಿಲುಕಿದ ಜೀವಾತ್ಮ ಜನನಮರಣ, ಕಷ್ಟಸುಖಗಳಿಗೆ ಗುರಿಯಾಗುತ್ತಾನೆ. ಶಕ್ತಿಗಳ ಸಂಪುರ್ಣ ವಿಕಾಸವಾದಾಗ ಶಿವನಾಗುತ್ತಾನೆ. 
ಶೈವಸಿದ್ಧಾಂತದಲ್ಲಿನ ಮೂವತ್ತಾರು ತತ್ತ್ವಗಳಲ್ಲಿ ಈ ಆರನ್ನು ಮಿಶ್ರ ತತ್ತ್ವಗಳು ಎನ್ನಲಾಗಿದೆ.	(ಜೆ.ಆರ್.ಎಂ.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ